Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ತೊರೆನೂರು ಭಾಗದಲ್ಲಿ ಹುಲಿ ಸಂಚಾರದ ಶಂಕೆ: ರೈತರಲ್ಲಿ ಆತಂಕ: ಅರಣ್ಯ ಇಲಾಖೆಯಿಂದ ಗಸ್ತು, ಕ್ಯಾಮರಾ ಅಳವಡಿಕೆ

by Kodagu Varadi•ಅಕ್ಟೋಬರ್ 9, 2026BREAKING
ತೊರೆನೂರು ಭಾಗದಲ್ಲಿ ಹುಲಿ ಸಂಚಾರದ ಶಂಕೆ: ರೈತರಲ್ಲಿ ಆತಂಕ: ಅರಣ್ಯ ಇಲಾಖೆಯಿಂದ ಗಸ್ತು, ಕ್ಯಾಮರಾ ಅಳವಡಿಕೆ

ಕುಶಾಲನಗರ, ಅ.9: ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಹಾರಂಗಿ ನೀರಾವರಿ ಪ್ರದೇಶದ ಚಿಕ್ಕನಾಯಕನಹೊಸಳ್ಳಿ ಭಾಗದಲ್ಲಿ ಗಂಡು ಹುಲಿಯೊಂದು ಬೀಡುಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ರೈತರು ಭೀತಿಗೊಂಡಿದ್ದಾರೆ. ಅರಣ್ಯದಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾದ ಈ ಹುಲಿ ರೈತರ ಕೃಷಿ ಹೊಲದಲ್ಲಿ ಅಡಗಿರಬಹುದು ಎಂದು ರೈತರು ತಿಳಿಸಿದ್ದಾರೆ. ತೊರೆನೂರು ವಿರಕ್ತ ಮಠ, ಸರ್ಕಾರಿ ಪ್ರೌಢಶಾಲೆ ಸಮೀಪದ ಬನ, ಕೊಲ್ಲಿ ಪ್ರದೇಶ ಹಾಗೂ ಚಿಕ್ಕನಾಯಕನಹೊಸಳ್ಳಿ ವ್ಯಾಪ್ತಿಯ ಜಮೀನುಗಳಿಗೆ ಸುಮಾರು 15 ವರ್ಷ ಪ್ರಾಯದ ಗಂಡು ಹುಲಿ ಬಂದಿರುವುದನ್ನು ಅಲ್ಲಿ ಕಂಡುಬಂದ ಹೆಜ್ಜೆ ಗುರುತುಗಳು ದೃಢಪಡಿಸಿವೆ. ಅದರಿಂದ ಕಳೆದ 5-6 ದಿನಗಳಿಂದ ಈ ಪ್ರದೇಶದಲ್ಲಿ ಹುಲಿ ಸಂಚರಿಸುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಸೋಮವಾರಪೇಟೆ ವಲಯದ ಆರ್.ಎಫ್.ಓ. ಮಲ್ಲೇಶ್ ಅವರು ರ‍್ಯಾಪಿಡ್ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದು, ಡಿ.ಆರ್.ಎಫ್.ಓ. ರೇಣುಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಕಳೆದ ಮೂರು ದಿನಗಳಿಂದ ಸಿಬ್ಬಂದಿ ರಾತ್ರಿ ವೇಳೆಯೂ ಗಸ್ತು ನಡೆಸುತ್ತಿದ್ದರೂ ಹುಲಿ ಇದುವರೆಗೆ ಪ್ರತ್ಯಕ್ಷವಾಗಿಲ್ಲ. ಹಾಗೂ ಹುಲಿಯ ಸಂಚಾರ ಪತ್ತೆಹಚ್ಚಲು ಗುರುವಾರ ಸಂಜೆ ಚಿಕ್ಕನಾಯಕನಹೊಸಹಳ್ಳಿ ಬಳಿ 4 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿ ಪತ್ತೆಗೆ ಗಸ್ತು ನಡೆಯುತ್ತಿದೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್ ತಿಳಿಸಿದ್ದಾರೆ. ನಾಗರಹೊಳೆ ಅಭಯಾರಣ್ಯದಿಂದ ಬಂದಿರಬಹುದೆಂದು ಶಂಕಿಸಲಾದ ಈ ಒಂಟಿ ಹುಲಿ, ರೈತರ ತೋಟ ಅಥವಾ ಹುಲುಸಾಗಿ ಬೆಳೆದಿರುವ ಬೆಳೆಗಳ ನಡುವೆ ಅಡಗಿರಬಹುದು ಎನ್ನಲಾಗಿದೆ. ಹುಲಿ ಬೇರೆಡೆಗೆ ಸ್ಥಳಾಂತರಗೊಂಡಿರುವ ಸಾಧ್ಯತೆಯೂ ಇದೆ. ನಿಡ್ತ ಮೀಸಲು ಅರಣ್ಯ, ಹೆಬ್ಬಾಲೆ, ಹಳೇಕೋಟೆ, ಚಿನ್ನೇನಹಳ್ಳಿ, ತೊರೆನೂರು, ಚಿಕ್ಕನಾಯಕನಹೊಸಳ್ಳಿ ಹಾಗೂ ನೆರೆಯ ಅರಕಲಗೂಡು ತಾಲ್ಲೂಕಿನ ಅರಗಲ್ಲು ಭಾಗದ ಕೃಷಿ ಪ್ರದೇಶ ಅಥವಾ ಕುರುಚಲು ಕಾಡಿನಲ್ಲಿ ಅಡಗಿರಬಹುದು, ಇಲ್ಲವೇ ತನ್ನ ಆವಾಸ ಸ್ಥಾನದತ್ತ ತೆರಳಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಖಚಿತಪಡಿಸಿಲ್ಲ. ಈ ಭಾಗದ ರೈತರು ಭತ್ತದ ಜೊತೆಗೆ ಶುಂಠಿ, ಕೆಸವಿನ ಗೆಡ್ಡೆ, ಅಡಿಕೆ, ಬಾಳೆ, ಮೆಕ್ಕೆಜೋಳ ಇತ್ಯಾದಿ ಬೆಳೆ ಬೆಳೆದಿದ್ದು, ಹುಲಿಯ ಭಯದಿಂದ ಜಮೀನಿಗೆ ನೀರು ಹಾಯಿಸಲು ಮತ್ತು ಕೃಷಿ ಕಾರ್ಯಕ್ಕೆ ತೆರಳಲು ಹೆದರುವಂತಾಗಿದೆ ಎಂದು ತೊರೆನೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಕೆ. ವಸಂತ ಆತಂಕ ವ್ಯಕ್ತಪಡಿಸಿದ್ದಾರೆ. ರೈತರ ಜಮೀನಿನಲ್ಲಿ ಹುಲಿ ಅಡಗಿದ್ದರೆ ತಕ್ಷಣ ಅದನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಚಿಕ್ಕನಾಯಕನಹೊಸಳ್ಳಿಯ ರೈತರಾದ ಶೇಷಾಚಲ ಮತ್ತು ಟಿ.ಎಂ. ಸುರೇಶ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹಾಗೂ ಪರಿಸರ ಪ್ರೇಮಿ ಕಾರ್ಯಕರ್ತರಾದ ಟಿ.ಜಿ. ಪ್ರೇಮ್‌ಕುಮಾರ್ ಅವರು, ಸುತ್ತಮುತ್ತಲಿನ ರೈತರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ತಮ್ಮ ಜಮೀನುಗಳಲ್ಲಿ ಸಂಚರಿಸಬೇಕೆಂದು ಮನವಿ ಮಾಡಿದ್ದಾರೆ.

ತೊರೆನೂರು ಭಾಗದಲ್ಲಿ ಹುಲಿ ಸಂಚಾರದ ಶಂಕೆ: ರೈತರಲ್ಲಿ ಆತಂಕ: ಅರಣ್ಯ ಇಲಾಖೆಯಿಂದ ಗಸ್ತು, ಕ್ಯಾಮರಾ ಅಳವಡಿಕೆ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!