Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಜ್ಯ

ಹಾಸನದಲ್ಲಿ ಅ.೧೧ ರಂದು “ಮಾಣಿಕ್ಯ ಸಂಭ್ರಮ ೨೦೨೬”: ೨೮ ಕೃತಿಗಳಿಗೆ ದತ್ತಿ ಪುರಸ್ಕಾರ, ೧೨ ಸಾಧಕರಿಗೆ ಗೌರವ

by Kodagu Varadi•ಅಕ್ಟೋಬರ್ 8, 2026BREAKING
ಹಾಸನದಲ್ಲಿ ಅ.೧೧ ರಂದು “ಮಾಣಿಕ್ಯ ಸಂಭ್ರಮ ೨೦೨೬”: ೨೮ ಕೃತಿಗಳಿಗೆ ದತ್ತಿ ಪುರಸ್ಕಾರ, ೧೨ ಸಾಧಕರಿಗೆ ಗೌರವ

ಹಾಸನ: ಕನ್ನಡ ಸಾಹಿತ್ಯ ಪರಂಪರೆಯನ್ನು ಮೆಲುಕು ಹಾಕುವ, ವಿವಿಧ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ಗೌರವಿಸುವ ಹಾಗೂ ರಾಜ್ಯ–ಹೊರರಾಜ್ಯಗಳ ಕವಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಣಿಕ್ಯ ಪ್ರಕಾಶನ (ರಿ.) ವತಿಯಿಂದ ಅಕ್ಟೋಬರ್ ೧೧, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಸಂಸ್ಕೃತ ಭವನದಲ್ಲಿ ಹನ್ನೊಂದನೇ ವಾರ್ಷಿಕೋತ್ಸವದ ಅಂಗವಾಗಿ “ಮಾಣಿಕ್ಯ ಸಂಭ್ರಮ ೨೦೨೬” ಆಯೋಜಿಸಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕಿ, ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ. ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆ. ರಾಯಚೂರಿನ ಆದಿಕವಿಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಿವಾನಂದ ಕೆಳಗಿನಮನಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ರವಿ ನಾಕಲಗೂಡು, ಕೆ.ಆರ್. ಲಕ್ಷ್ಮೀಕಾಂತ್, ಟಿ. ಸತೀಶ್ ಜವರೇಗೌಡ, ನಾಗರಾಜ್ ಹೆತ್ತೂರು, ಗಣೇಶ್ ತಮ್ಲಾಪುರ, ವರದರಾಜು ಡಿ.ಎಂ., ವೈ.ಎಸ್. ರಮೇಶ್, ಜಾವಗಲ್ ಪ್ರಸನ್ನಕುಮಾರ್, ನಾಗರಾಜ್ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದರು. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ೨೦೨೬ನೇ ಸಾಲಿನ ದತ್ತಿ ಪ್ರಶಸ್ತಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ೩೫೦ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಹಿರಿಯ ಸಾಹಿತಿಗಳ ತಂಡ ಎರಡು ತಿಂಗಳ ಕಾಲ ಮೌಲ್ಯಮಾಪನ ನಡೆಸಿ ೧೩ ದತ್ತಿಗಳಿಗೆ ೨೮ ಕೃತಿಗಳನ್ನು ಆಯ್ಕೆ ಮಾಡಿದೆ ಎಂದರು. ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಅವರು ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ದತ್ತಿ ದಾನಿಗಳಾದ ಉಡುಪಿಯ ಪ್ರಭಾವತಿ ಶೆಡ್ತಿ, ಹಾಸನದ ಸಿ.ಎನ್. ನೀಲಾವತಿ, ಮುಂಬಯಿಯ ಡಾ. ವಿಶ್ವೇಶ್ವರ ಎನ್. ಮೇಟಿ ಮತ್ತು ಡಾ. ಅಮರೇಶ ಪಾಟೀಲ, ರಾಯಚೂರಿನ ರೇಷ್ಮಾ ಕಂದಕೂರು, ಉತ್ತರ ಕನ್ನಡದ ಶಿವಲೀಲಾ ಹುಣಸಗಿ, ದಕ್ಷಿಣ ಕನ್ನಡದ ಫ್ಲಾವಿಯಾ ಅಲ್ಬುಕರ್ಕ್, ಶಿವಮೊಗ್ಗದ ಸೈಯದ್ ಮುಹಿಬುಲ್ಲ ಖಾದ್ರಿ, ಹಾಸನದ ಸುರೇಶ್ ಪಿಡಬ್ಲೂಡಿ ಮತ್ತು ಡಿ. ಸುಜಲಾದೇವಿ, ಆಲೂರಿನ ದೇಸು ಆಲೂರು, ಕಾರ್ಲೆಯ ಹರಿಣಿ ಆರ್ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳ ಸಾಹಿತ್ಯ ಸಾಧಕರು ಭಾಗವಹಿಸಲಿದ್ದಾರೆ. ಬೆಳಗಿನ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೨ ಸಾಧಕರನ್ನು ಗೌರವಿಸಲಾಗುತ್ತದೆ. ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿಗೆ ಮುಂಬಯಿಯ ಎನ್.ಬಿ. ಸವಳಸಂಗ, ಹಾಸನದ ಬಸವ ತತ್ತ್ವ ಪ್ರಚಾರಕ ಆರ್.ಇ. ಸೋಮಶೇಖರ, ಜಾವಗಲ್ಲಿನ ಸಮಾಜ ಸೇವಕ ಮೊಹಮ್ಮದ್ ಫೈರೋಜ್ ಗಾಂಧಿ, ಸಕಲೇಶಪುರದ ಚಲನಚಿತ್ರ ನಿರ್ದೇಶಕ ಅರುಣ್‌ಗೌಡ ಕರಡಿಗಾಲ, ಮುದ್ದೇಬಿಹಾಳದ ಝಾಕೀರ್ ನಬೀಸಾ ಹಾಗೂ ಹಾಸನದ ಪೌರಕಾರ್ಮಿಕ ದೀಪು ಭಾಜನರಾಗಿದ್ದಾರೆ. ಹೊಯ್ಸಳ ಸಾಹಿತ್ಯ ಪ್ರಶಸ್ತಿಗೆ ಬೆಳಗಾವಿಯ ಆರ್.ಎಸ್. ಪಾಟೀಲ, ಹಾಸನದ ವಾಣಿಘಟ್ಟಿ ಮತ್ತು ಬಾ.ನಂ. ಲೋಕೇಶ, ಚಾಮರಾಜನಗರದ ನಂದಿನಿ ಪ್ರಮೋದ್, ಮೈಸೂರಿನ ಎಸ್. ಶಿಶಿರಂಜನ್ ಹಾಗೂ ಧಾರವಾಡದ ಆರ್.ಎಂ. ಗೋಗೇರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಮಾತನಾಡಿ, ಮಧ್ಯಾಹ್ನದ ಅವಧಿಯಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಜಯಂತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷೆ ಕೆ.ಸಿ. ಗೀತಾ ಆಶಯ ನುಡಿಗಳನ್ನಾಡುವರು. ಕರ್ನಾಟಕ, ಆಂಧ್ರ, ಚೆನ್ನೈ ಹಾಗೂ ಮಹಾರಾಷ್ಟ್ರದಿಂದ ೧೫೦ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮುಂಬಯಿಯ ಡಾ. ವಿಶ್ವೇಶ್ವರ ಮೇಟಿ ಅವರ “ಹಳ್ಳಿ ಎಂಬ ಬಳ್ಳಿ” ಸಂಶೋಧನಾ ಕೃತಿಯನ್ನು ಹಿರಿಯ ಸಾಹಿತಿ ಬಿ.ಎಂ. ಭಾರತಿ ಹಾದಿಗೆ, ಉತ್ತರ ಕನ್ನಡದ ಎಸ್.ಜಿ. ಕಡೇಮನಿ ಅವರ “ಸಾಲು ಹಣತೆಗಳು” ಕೃತಿಯನ್ನು ರಾಜೇಶ್ವರಿ ಹುಲ್ಲೇನಹಳ್ಳಿ, ಹಳಿಯಾಳ ತಾಲ್ಲೂಕಿನ ಭಾರತಿ ಕೆ. ನಲವಡೆ ಅವರ “ಭಾವಸೆಲೆ” ಕೃತಿಯನ್ನು ವಾಸು ಸಮುದ್ರವಳ್ಳಿ, ಹಾಸನದ ಕವಯಿತ್ರಿ ಗಿರಿಜಾ ನಿರ್ವಾಣಿ ಅವರ “ಕರಿಮುಗಿಲು” ಕವನ ಸಂಕಲನವನ್ನು ಚೆನ್ನೈನ ಸಾಹಿತಿ ರಶ್ಮಿ ಚಂಗಚಂಡ ಹಾಗೂ ಹಾಸನದ ಎಚ್.ಜಿ. ನೀಲಮ್ಮ ಅವರ ಸಂಪಾದಿತ ಕೃತಿ “ಬದುಕು ಹಾಡಿದ ಹಾಡು” ಅನ್ನು ಜನನಿ ಫೌಂಡೇಶನ್ ಅಧ್ಯಕ್ಷೆ ಎಚ್.ಎಸ್. ಭಾನುಮತಿ ಅವರು ಲೋಕಾರ್ಪಣೆ ಮಾಡಿ ಮಾತನಾಡಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್, ರವಿ ನಾಕಲಗೂಡು, ನಾಗರಾಜ್ ಹೆತ್ತೂರು, ಗಣೇಶ್ ತಮ್ಲಾಪುರ, ಆಲೂರು ಸರಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು ಡಿ.ಎಂ., ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ಎಚ್.ಎಸ್. ಭಾನುಮತಿ ಹಾಗೂ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ ಉಪಸ್ಥಿತರಿದ್ದರು.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!