ಕುಶಾಲನಗರ ಅ.08: ಕೊಣನೂರು–ಮಾಕುಟ್ಟ ರಾಜ್ಯ ಹೆದ್ದಾರಿ ಪರಿಮಿತಿಗೆ ಒಳಪಡುವ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳುಗೋಡು–ರಸಲ್ಪುರ ಗ್ರಾಮದ ಬಳಿ ₹2.50 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಕಳೆದ ಸೆಪ್ಟಂಬರ್ ತಿಂಗಳ 8ನೇ ತಾರೀಕಿನಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಕಳೆದ ತಿಂಗಳ 19 ರಂದೇ ಕಾಮಗಾರಿ ಆರಂಭಿಸುವಂತೆ ಶಾಸಕರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಗುದ್ದಲಿ ಪೂಜೆಯ ಸಂಭ್ರಮದ ನಡುವೆಯೇ ಕಾಮಗಾರಿ ಆರಂಭಕ್ಕೆ ಆದ ವಿಳಂಬದ ಬಗ್ಗೆ ಸ್ಥಳೀಯರ ಆಕ್ರೋಶ ಹೊರಬಿದ್ದಿದೆ. ಶಾಸಕರ ಕಟ್ಟುನಿಟ್ಟಿನ ಸೂಚನೆಯಿದ್ದರೂ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳು ಕಾಮಗಾರಿ ಆರಂಭಿಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಸ್ಥಳೀಯ ನಾಯಕರು ಹಾಗೂ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳ ಆದೇಶಕ್ಕೇ ಬೆಲೆ ಇಲ್ಲವೆಂದಾದರೆ ಸಾಮಾನ್ಯ ಜನರ ಗೋಳು ಕೇಳುವವರು ಯಾರು ಎಂಬುದು ಅವರ ಪ್ರಶ್ನೆಯಾಗಿದೆ. ಹಲವಾರು ವರ್ಷಗಳಿಂದ ಈ ರಸ್ತೆ ಗುಂಡಿಬಿದ್ದು ಹದಗೆಟ್ಟಿದೆ. ಪ್ರವಾಸಿ ತಾಣ ದುಬಾರೆಗೆ ತೆರಳುವವರು ಇದೇ ರಸ್ತೆಯನ್ನೇ ಅವಲಂಬಿಸಬೇಕಿದ್ದು, ಪ್ರವಾಸಿಗರು ಹಾಗೂ ಗ್ರಾಮಸ್ಥರು ನಿತ್ಯ ಗುಂಡಿಗಳ ನಡುವೆ ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ. ಗುದ್ದಲಿ ಪೂಜೆಯಷ್ಟೇ ಸಾಲದು, ಕಾಮಗಾರಿ ತಕ್ಷಣ ಆರಂಭವಾಗಿ ಗುಣಮಟ್ಟದೊಂದಿಗೆ ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೆದ್ದಾರಿ ಹೆಸರಿಗೆ ಮಾತ್ರ, ರಸ್ತೆ ಗುಂಡಿಮಯ:: ಗುದ್ದಲಿ ಪೂಜೆ ನೆರವೇರಿದ್ದರು ಕಾಮಗಾರಿ ಆರಂಭಿಸಲು ವಿಳಂಬ ನೀತಿ :: ಗ್ರಾಮಸ್ಥರ ಆಕ್ರೋಶ
by Kodagu Varadi•ಅಕ್ಟೋಬರ್ 8, 2026BREAKING

ಕಾಮೆಂಟ್‌ಗಳು (0)