ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2026-27ನೇ ಸಾಲಿನಲ್ಲಿ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಿರುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿರುವ ನಿಗಮದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2026ರ ಸಂಜೆ 5.30 ಕೊನೆಯ ದಿನವಾಗಿದೆ. ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಹಾಗೂ ನಿಗಮದ ಮೂಲಕ ಸಹಾಯಧನ ನೀಡಲಾಗುವುದು. 21ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು, ಸಾಲದ ಮೊತ್ತ ಕನಿಷ್ಠ ₹50,000ದಿಂದ ಗರಿಷ್ಠ ₹3 ಲಕ್ಷದವರೆಗೆ ಇರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾರ್ಷಿಕ ಆದಾಯ ಮಿತಿ ₹2 ಲಕ್ಷವಾಗಿದ್ದು, ಶೇ.75ರಷ್ಟು ಅಥವಾ ಗರಿಷ್ಠ ₹2 ಲಕ್ಷದವರೆಗೆ ಸಹಾಯಧನ ದೊರೆಯಲಿದೆ. ಇತರೆ ವರ್ಗದ ಫಲಾನುಭವಿಗಳಿಗೆ ಆದಾಯ ಮಿತಿ ₹1.50 ಲಕ್ಷವಾಗಿದ್ದು, ಶೇ.30ರಷ್ಟು ಅಥವಾ ಗರಿಷ್ಠ ₹90,000ದವರೆಗೆ ಸಹಾಯಧನ ನೀಡಲಾಗುವುದು. ಇದಲ್ಲದೆ, ಚೇತನ ಯೋಜನೆಯಡಿ ಮಹಿಳೆಯರಿಗೆ, ಧನಶ್ರೀ ಯೋಜನೆಯಡಿ ಎಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳಲು ತಲಾ ₹45,000 ಪ್ರೋತ್ಸಾಹಧನ ನೀಡಲಾಗುವುದು. ಈ ನಾಲ್ಕೂ ಯೋಜನೆಗಳಿಗೆ ವಯೋಮಿತಿ 20ರಿಂದ 55 ವರ್ಷವಾಗಿದೆ. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು. ಎಲ್ಲಾ ಯೋಜನೆಗಳಿಗೆ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಚೇತನ ಮತ್ತು ಧನಶ್ರೀ ಯೋಜನೆಗಳಿಗೆ ಆನ್ಲೈನ್ ಜೊತೆಗೆ ಆಫ್ಲೈನ್ನಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ನಿಗಮದ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸಬೇಕು. ಸರ್ಕಾರದ ವಿವೇಚನಾ ಕೋಟಾ ಹಾಗೂ ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಬಯಸುವವರು ಸಚಿವರು ಅಥವಾ ಶಾಸಕರು, ಇಲ್ಲವೇ ನಿಗಮದ ಅಧ್ಯಕ್ಷರ ಶಿಫಾರಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹಿಂದಿನ ಸಾಲುಗಳಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಈ ವರ್ಷ ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಒಮ್ಮೆ ನಿಗಮದ ಯಾವುದಾದರೂ ಯೋಜನೆಯಡಿ ಸೌಲಭ್ಯ ಪಡೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪನಿರ್ದೇಶಕರು ಅಥವಾ ಅಭಿವೃದ್ಧಿ ನಿರೀಕ್ಷಕರನ್ನು ಸಂಪರ್ಕಿಸಬಹುದು. ನಿಗಮದ ವೆಬ್ಸೈಟ್ kswdc.karnataka.gov.in ಅಥವಾ ದೂರವಾಣಿ ಸಂಖ್ಯೆ 080-26632792 / 080-25532973 ಮೂಲಕವೂ ಮಾಹಿತಿ ಪಡೆಯಬಹುದು.




ಕಾಮೆಂಟ್ಗಳು (0)